ಜಟಾಯು - 
ರಾಮಾಯಣ ಮಹಾಭಾರತ ಮತ್ತು ಪುರಾಣಗಳಲ್ಲಿ ಪ್ರಸಿದ್ಧನಾಗಿರುವ ಒಬ್ಬ ಪಕ್ಷಿರಾಜ. ವಿನತೆಯ ಪುತ್ರನಾದ ಅರುಣನಿಂದ ಶ್ಯೇನಿ ಎಂಬುವಳಲ್ಲಿ ಜನಿಸಿದವ. ಸಂಪಾತಿ ಇವನ ಅಣ್ಣ. ಇವರಿಬ್ಬರೂ ಪರಸ್ಪರ ವೇಗವನ್ನು ಪರೀಕ್ಷಿಸಿ ತಿಳಿದುಕೊಳ್ಳುವ ಇಚ್ಛೆಯಿಂದ ಆಕಾಶದಲ್ಲಿ ಬಹುಮೇಲೆ ಹೋದಾಗ, ಜಟಾಯು ಸೂರ್ಯತಾಪದಿಂದ ಮೋಹಗೊಳ್ಳುತ್ತಾನೆ. ಅದನ್ನು ಕಂಡ ಸಂಪಾತಿ ಇವನ ಮೇಲೆ ತನ್ನ ರೆಕ್ಕೆಗಳನ್ನು ಅಗಲಿಸಿಕೊಂಡು ಬಂದರೂ ಇವನು ಸೊರಗಿ ದಂಡಕಾರಣ್ಯದಲ್ಲಿ ಬೀಳುತ್ತಾನೆ; ಸಂಪಾತಿ ದಕ್ಷಿಣ ಸಮುದ್ರ ತೀರದಲ್ಲಿ ಬಿದ್ದು ಒಬ್ಬ ಮುನಿಯಿಂದ ರಕ್ಷಿತನಾಗುತ್ತಾನೆ. ಚೇತರಿಸಿಕೊಂಡ ಜಟಾಯು ದಂಡಕಾರುಣ್ಯದ ಒಂದು ಗುಹೆಯಲ್ಲಿ ವಾಸಿಸುತ್ತಿದ್ದು ವನವಾಸಕ್ಕೆಂದು ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದ ರಾಮಲಕ್ಷ್ಮಣ ಸೀತೆಯರನ್ನು ಸಂಧಿಸುತ್ತಾನೆ. ತಾನೂ ದಶರಥನೂ ಬಾಲ್ಯಸ್ನೇಹಿತರೆಂದು ತಿಳಿಸಿ ಅವರಿಗೆ ಎಲ್ಲ ಸಹಾಯದ ಭರವಸೆ ನೀಡುತ್ತಾನೆ. ಸ್ವಲ್ಪ ಕಾಲಾನಂತರ ಸೀತೆಯನ್ನು ಅಪಹರಿಸಿಕೊಂಡು ಹೋಗುತ್ತಿದ್ದ ರಾವಣನೊಡನೆ ಹೋರಾಡುತ್ತಾನೆ. ಆಗ ರಾವಣ ಇವನ ರೆಕ್ಕೆಗಳನ್ನು ಕತ್ತರಿಸಿದ್ದರಿಂದ ಕೆಳಗೆ ಬೀಳುತ್ತಾನೆ. ತರುವಾಯ ಸೀತೆಯನ್ನು ಹುಡುಕುತ್ತ ಬಂದ ರಾಮಲಕ್ಷ್ಮಣರನ್ನು ಕಂಡು ಅವರಿಗೆ ಸೀತಾ ವೃತ್ತಾಂತವನ್ನು ತಿಳಿಸಿ ಪ್ರಾಣತ್ಯಾಗ ಮಾಡುತ್ತಾನೆ. ಇವನ ಉತ್ತರಕ್ರಿಯಾದಿಗಳನ್ನು ರಾಮ ಮಾಡುತ್ತಾನೆ.

 	ಮಹಾಭಾರತದ ಪ್ರಕಾರ ಜಟಾಯುವಿಗೆ ಕರ್ಣಿಕಾರ, ಶತಗಾಮಿ, ಸಾರಸ, ರಜ್ಜುಬಾಲ, ಭೇರುಂಡ ಎಂಬುದಾಗಿ ಐವರು ಮಕ್ಕಳು.
	(ಬಿ.ಕೆ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ